ಪ್ರಭಾಕರ್ ಎಂ
	(1922-. ) ತಮ್ಮ ಕಂಠಸಿರಿ ಹಾಗೂ ಭಾವಪೂರ್ಣಗಾಯನ ಶೈಲಿಯಿಂದ ಕನ್ನಡ ಭಾವಗೀತೆಗಳ ಗಾಯನವನ್ನು ಶ್ರೀಮಂತಗೊಳಿಸಿದವರು. ಪ್ರಭಾಕರ್ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ. ತಾಯಿ ಕಾವೇರಿ ಬಾಯಿ, ತಂದೆ ರಂಗರಾವ್ ಪ್ರಸಿದ್ಧ ಸಂಗೀತಗಾರರು, ಸಾಹಿತಿಗಳು ಜೊತೆಗೆ ಚಿತ್ರಕಲೆ ಮತ್ತು ನಾಟಕ ಅಭಿನಯಗಳನ್ನು ರೂಢಿಸಿಕೊಂಡವರೂ ಆಗಿದ್ದರು. ಹಲವು ಕ್ಷೇತ್ರಗಳಲ್ಲಿ ರಂಗರಾವ್ ಅವರಿಗೆ ಪರಿಣತಿ ಇದ್ದರೂ, ಜೀವನಕ್ಕೆ ಆಸರೆಯಾಗಿ ಯಾವುವೂ ಗಟ್ಟಿಯಾಗಿ ನಿಲ್ಲಲಿಲ್ಲ. ಶಾಲಾ ಶಿಕ್ಷಕಿಯಾಗಿದ್ದ ಕಾವೇರಿ ಬಾಯಿಯವರೇ ಸಂಸಾರದ ಹೊರೆ ಹೊರಬೇಕಾಯಿತು. ಹತ್ತು ಮಕ್ಕಳ ದೊಡ್ಡ ಸಂಸಾರದಲ್ಲಿ ಒಬ್ಬನಾಗಿ ಜನಿಸಿದ ಪ್ರಭಾಕರ್‍ರವರಿಗೆ ಬಾಲ್ಯದಿಂದಲೇ ಬಡತನ ಬಳುವಳಿಯಾಗಿ ಬಂದಿತ್ತು. ನಾಲ್ಕನೆಯ ತರಗತಿಗೇ ವಿದ್ಯಾಭ್ಯಾಸ ಮುಗಿದುಹೋಯಿತು. ತಂದೆ ರಂಗರಾವ್, ಅಣ್ಣ ವಿಮಲಾನಂದದಾಸ್ ಜೊತೆ ಊರಿಗೆ ಬಂದ ನಾಟಕ ಮಂಡಲಿಯಲ್ಲಿ ಕೆಲಸ ಮಾಡಲು ಪ್ರಾರಂಭ. ಅಣ್ಣ ವಿಮಲಾನಂದದಾಸ್‍ಗೆ ಹಾರ್ಮೋನಿಯಂ ಸಾಥಿ ನುಡಿಸುವುದು ಮತ್ತು ಹಾಡುವುದೇ ಕಾಯಕವಾಯಿತು. ಹಿರಿಯ ಅಣ್ಣ ವಿಮಲಾನಂದದಾಸರು ಕೀರ್ತನ ಕಲೆಯಲ್ಲಿ ದೊಡ್ಡ ಹೆಸರು ಮಾಡಿದಂತೆ, ಕಿರಿಯ ಅಣ್ಣ ಜಗನ್ನಾಥರಾವ್ ಅವರು ಹಾರ್ಮೋನಿಯಂ ತಯಾರಿಕೆಯಲ್ಲಿ ಪ್ರಸಿದ್ಧರಾದರು. ಸಹೋದರಿಯಾದ ಪಂಢರಿಬಾಯಿ ಮತ್ತು ಮೈನಾವತಿ ಚಿತ್ರತಾರೆಯಾಗಿ ಮಿಂಚಿದರು.
	ಪ್ರಭಾಕರ್ ಅವರಿಗೆ ನಾಟಕದ ಸಂಪರ್ಕವಿರುವಾಗಲೇ ಕಾಳಿಂಗರಾಯರು ಒಡನಾಟ ಲಭಿಸಿತು. ಕಾಳಿಂಗರಾಯರು ಕವಿತಾ ಗಾಯನದ ಹುಚ್ಚು ಹಿಡಿಸಿದರು. ಊರೂರು ತಿರುಗಿ, ಪಕ್ಕ ವಾದ್ಯವಾಗಿ ಹಾರ್ಮೋನಿಯಂ ನುಡಿಸಿ, ನಾಟಕ ತಂಡದೊಂದಿಗೆ ಅಲೆಯುತ್ತಿದ್ದ ಪ್ರಭಾಕರ್ ಅವರಿಗೆ ತಾನು ಗಾಯಕನಾಗಿ ಸಾಧಿಸಬೇಕಾದುದು ಬಹಳಷ್ಟಿದೆ ಎಂದು ವೇದ್ಯವಾದ ಕೂಡಲೆ ಗಾಯನಕ್ಕೆ ಅಗತ್ಯವಿರುವ ಶಾಸ್ತ್ರದ ತಳಹದಿಯ ಕಲಿಕೆಗಾಗಿ ಶಿವಮೊಗ್ಗಗೆ ಬಂದು ಅಲ್ಲಿ ವಿದ್ವಾನ್ ಬಿ.ಎಸ್. ರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪಡೆದರು. ನಂತರ ಬೆಂಗಳೂರಿನ ಎಲ್.ಎಸ್. ನಾರಾಯಣಸ್ವಾಮಿ ಭಾಗವತರಲ್ಲಿ ಪ್ರೌಢಶಿಕ್ಷಣವನ್ನೂ ಪಡೆದರು. ಹಿಂದೂಸ್ತಾನಿ ಸಂಗೀತದ ಆಸಕ್ತಿ ಬಂದಂತೆ ಗುರುವಿಗಾಗಿ ಹುಡುಕಾಡಿದ ಪ್ರಭಾಕರ್ ಮುಂಬಯಿಗೆ ತೆರಳಿ ಅಲ್ಲಿ ಹುಡುಕಾಟ ನಡೆಸಿ ವಿಫಲರಾದರು.
	ಪ್ರಭಾಕರ್ ಅವರು ಆಕಾಶವಾಣಿಯಲ್ಲಿ ಹಾಡುತ್ತಿದ್ದಾಗ ಆಗ ಗೋಟುವಾದ್ಯ ಕಲಾವಿದರಾಗಿದ್ದ ವರಾಹಸ್ವಾಮಿಯವರು ಕನ್ನಡ ಗೀತೆಗಳನ್ನು ಹಾಡಲು ಪ್ರೇರೇಪಿಸಿದರು. ಆಕಾಶವಾಣಿಯ ಸಂಗೀತ ಸಂಯೋಜಕರಾಗಿದ್ದ ವೀಣಾ ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ಪಾರ್ಥಸಾರಥಿ, ಪದ್ಮಚರಣ್, ಮುಂತಾದವರ ನಿರ್ದೇಶನದಲ್ಲಿ ಪ್ರಭಾಕರ್ ಅವರ ದನಿ ಮೊರೆಯಿತು. ನೂರಾರು ಹಾಡುಗಳಲ್ಲಿ ಪ್ರಭಾಕರ್‍ರವರು ಕೊರಳಿನ ದನಿ ಅನುರಣನಗೊಂಡಂತೆ, ನೂರಾರು ಹಾಡುಗಳೂ ಪ್ರಭಾಕರ್ ಅವರ ರಾಗಸಂಯೋಜನೆಯಿಂದ ಅಲಂಕೃತಗೊಂಡವು. ಶುಭ ನುಡಿಯೆ ಶಕುನದ ಹಕ್ಕಿ, ನೀ ಬರುವ ದಾರಿಯಲಿ, ಆದರದಿ ನಸುನಗೆ, ಹಾಡು ಹಳೆಯದಾದರೇನು, ಪಡುವಣ ಬಾನಿನ ನೀಲಿಯ ಹಣೆಯಲಿ ಮುಂತಾದ ಹಾಡುಗಳು ನೆನಪಾಗಿ ಉಳಿದವು. ಆಕಾಶವಾಣಿ ಅವರ ಗಾನ ಪ್ರತಿಭೆಯನ್ನು ಬೆಳಕಿಗೆ ತಂದಿತು. 
ಸುಗಮ ಮತ್ತು ಶಾಸ್ತ್ರೀಯ ಎರಡೂ ಸಂಗೀತ ಪ್ರಕಾರಗಳಲ್ಲಿ ಪರಿಶ್ರಮವಿದ್ದ, ಜನಪ್ರಿಯತೆ ಗಳಿಸಿದ ಪ್ರಭಾಕರ್ ಅವರಿಗೆ ಸಂದ ಪ್ರಶಸ್ತಿಗಳು, ಬಹುಮಾನಗಳು ಅನೇಕ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪ `ಗಾಯಕರತ್ನ ಎಂದು ಸನ್ಮಾನಿಸಿದರು. ಕರ್ನಾಟಕ ಗಾನಕಲಾ ಪರಿಷತ್ತು ಶಿವಮೊಗ್ಗೆಯಲ್ಲಿ ನಡೆಸಿದ 16ನೇ ಸಮ್ಮೇಳನದಲ್ಲಿ ಸನ್ಮಾನಿಸಿತು. ಕರ್ನಾಟಕ ಸಂಗೀತನೃತ್ಯ ಅಕಾಡೆಮಿಯ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿತು(1988-89). ಸುಗಮಸಂಗೀತಕ್ಕಾಗಿ ಕರ್ನಾಟಕ ಸರಕಾರ ನೀಡುವ ಅತುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಪ್ರಶಸ್ತಿ (2001) ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಭಾಕರ್ ಅವರು ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರಲ್ಲಿ ಬಿ.ಕೆ. ಸುಮಿತ್ರ, ಆರ್.ರಮಾದೇವಿ, ಕಸ್ತೂರಿಶಂಕರ್, ಶಿವಮೊಗ್ಗ ಸುಬ್ಬಣ್ಣ ಪ್ರಮುಖರು.			(ಜಯಶ್ರೀ ಅರವಿಂದ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ